ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ (೧೬ ನವೆಂಬರ್ ೧೯೪೮ – ೧೦ ಜನವರಿ ೨೦೧೧) ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಛಾಯಾಗ್ರಾಹಕ. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.. == ಪರಿಚಯ == ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು. == ವೃತ್ತಿ == ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್‌ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು. == ಪ್ರಶಸ್ತಿ == ೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ. == ನಿಧನ == ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011(2011-01-10)ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ. == ಚಿತ್ರಪಟ್ಟಿ == === ಟಿವಿ ಚಿತ್ರ === === ಚಲನಚಿತ್ರಗಳು === ಹಲವು ಪ್ರಶಸ್ತಿ ವಿಜೇತ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿರುವುದನ್ನು ತೋರುವ ಎಸ್. ರಾಮಚಂದ್ರ ಚಿತ್ರಗಳ ಅಪೂರ್ಣ ಪಟ್ಟಿ. == ಆಕರ ==